ಮಂಗಳಯಾನ ತದನಂತರ! ಸಾಧ್ಯತೆಗಳು ಮತ್ತು ಸವಾಲುಗಳು



"ಮಂಗಳಯಾನ ತದನಂತರ! ಸಾಧ್ಯತೆಗಳು ಮತ್ತು ಸವಾಲುಗಳು"



ಕಾಲದ ಅಸೀಮ ಪರಿಧಿಯನ್ನು ವಿವರಿಸುತ್ತಾ ಕವಿ ದ.ರಾ ಬೇಂದ್ರೆಯವರು "ತಿಂಗಳಿನೂರಿನ ನೀರನು ಹೀರಿ ಮಂಗಳ ಲೋಕದ ಅಂಗಳಕ್ಕೇರಿ ಹಕ್ಕಿ ಹಾರುತಿದೆ ನೋಡಿದಿರಾ!"ಎಂದು ಹಾಡಿದರು. ಕವಿ ಕಂಡ ಸತ್ಯ ಇಂದು ನನಸಾಗಿದೆ ಮಿತ್ರರೇ.ನಿಮಗೆಲ್ಲ ತಿಳಿದಂತೆ ನಮ್ಮ ಭಾರತ ಇಂದು ಮಂಗಳನ ಕಕ್ಷೆಯಲ್ಲಿ ತನ್ನದೇ ಆದ ವ್ಯೋಮನೌಕೆಯನ್ನು ಇರಿಸಿದೆ.


.

ಇದು ಅಂಗಾರಕನ ಕುರಿತು ಮನುಜನಿಗಿದ್ದ ಅಪ್ಯಾಯಮಾನವಾದ ಕುತೂಹಲದ ಒಂದು ನಿದರ್ಶನ.ಆದರೆ ಈ ಮನುಷ್ಯನ ಕುತೂಹಲಗಳಿಗೆಲ್ಲ ಉತ್ತರ ಹುಡುಕಲು ಬಾಹ್ಯಾಕಾಶ ಯುಗವೇ ಆರಂಭವಾಗಿ ಕ್ಯುರಿಯೊಸಿಟಿ ಎಂದು ಆಂಗ್ಲಾನುವಾದದ ’ಕುತೂಹಲ’ ಎಂಬ ಹೆಸರಿನ ರೋವರ್ಗಳು ಬಂದಾಯಿತು.

'ಅಮೆರಿಕ, ರಷ್ಯಾದವರು ಮಂಗಳ ಗ್ರಹಕ್ಕೆ ಹೋಗಿದ್ದಾರೆ. ನಾವೂ ಯಾಕೆ ಒಂದು ಕೈ ನೋಡಿ ಬಿಡಬಾರದು? ಜಗತ್ತಿಗೂ ನಮ್ಮ ದೇಶದ ವಿಜ್ಞಾನ ಕ್ಷೇತ್ರ ಎಷ್ಟು ಮುಂದುವರಿದಿದೆ ಎಂಬ ಸಂದೇಶ ಕೊಟ್ಟಂತಾಗುತ್ತದೆ'.ಇಂಥ ಒಂದು ಮಹತ್ವಾಂಕ್ಷೆ ಇಸ್ರೋದ ವಿಜ್ಞಾನಿಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯಲು ಆರಂಭಿಸಿದ್ದು 'ಚಂದ್ರಯಾನ-1'ರ ಸಮಯದಲ್ಲಿ.ಭಾರತದ ಮಂಗಳನೌಕೆ (ಮಾಮ್‌– ಮಾರ್ಸ್‌ಆರ್ಬಿಟರ್‌ಮಿಷನ್‌( ಮೊತ್ತ ಮೊದಲ ಯತ್ನದಲ್ಲೇ ಮಂಗಳ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿ ಈಗ ನಿರುಮ್ಮಳವಾಗಿ ಆ ಗ್ರಹವನ್ನು ಗಿರಕಿ ಹೊಡೆಯುತ್ತಿದೆ.

ಮಾಮ್‌– ಮಾರ್ಸ್‌ಆರ್ಬಿಟರ್‌ಮಿಷನ್‌
ಅದು ಹೀಗೆ ಕೆಂದೂಳಿನ ಕಾಯವನ್ನು ಸುತ್ತು ಹೊಡೆಯುತ್ತಿರುವುದು ಸರಿಸುಮಾರು 22.5 ಕೋಟಿ ಕಿ.ಮೀ.ಗಳಷ್ಟು ದೂರದಲ್ಲಿ ಎಂಬುದೇ ನಮ್ಮ ತಲೆಯನ್ನು ಗಿರ್ರೆನ್ನಿಸುತ್ತದೆ. ಕುತೂಹಲ, ಅಚ್ಚರಿ, ಬೆರಗು, ಪ್ರತಿಷ್ಠೆಗಳೆಲ್ಲಾ ಅಡಕಗೊಂಡ ಸಾಹಸ ಯಾನ ಇದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.ಆದರೇ ಇವತ್ತಿನ ಚರ್ಚೆಯ ವಿಷಯವನ್ನು ಕೂಲಂಕುಶವಾಗಿ ಗಮನಿಸಿ ನೋಡಿದಾಗ ನನಗನಿಸುವುದು ಮಂಗಳಯಾನವೇ ಒಂದು ದೊಡ್ಡ ಸವಾಲಾಗಿತ್ತು ಆದರೆ ಅದು ತನ್ನಿಂದಲೂ ಸಾಧ್ಯ ಎಂಬುದನ್ನ ಇವತ್ತು ಭಾರತ ತೋರಿಕೊಟ್ಟಿದೆ ಮಿತ್ರರೇ.. ಆದರೆ ತದನಂತರ? ಇದು ಪ್ರಶ್ನೆಯೋ? ಕುತೂಹಲವೋ? ಸವಾಲೋ? ತಿಳಿಯದಿದ್ದರೂ ಭವ್ಯ ಇತಿಹಾಸ ಹೊಂದಿದ್ದ ಮಂಗಳನ ಅಧ್ಯಯನಕ್ಕೆ ಭವ್ಯ ಭವಿಷ್ಯದ ಸಾಧ್ಯತೆಗಳಿವೆ ಎಂಬುದಂತೂ ವೈಜ್ನಾನಿಕ ಗಿಳಿಶಾಸ್ತ್ರವೇ ಹೌದು.

ಆದರೆ ಮಂಗಳನ ಹುಚ್ಚೇಕೆ? ಎಂಬುದೇ ಬಹಳ ಜನರಿಗೆ ಕುತೂಹಲ,


ಇತ್ತೀಚೆಗಷ್ಟೇ ಮಂಗಳಕ್ಕೆ ಹೋಗಿರುವ ನಾಸಾದ ಕ್ಯೂರಿಯಾಸಿಟಿ ನೌಕೆ, ಅಲ್ಲಿ ನೀರಿನ ಅಂಶವಿದೆ ಎಂದು ಗುಮಾನಿ ಕೊಟ್ಟಿದೆ. ಹೀಗಾಗಿ ಮನುಷ್ಯನು ಅಲ್ಲಿ ಸೈಟ್ ಖರೀದಿಸಿ ಬದುಕಲು ಇದು ಸಹಾಯವಾಗಬಹುದು ಎಂಬ ಕ್ಯೂರಿಯಾಸಿಟಿ ನಮ್ಮ ವಿಜ್ಞಾನಿಗಳಿಗೆ.ನೀರಷ್ಟೇ ಅಲ್ಲ, ಇಲ್ಲಿರುವ ಮಣ್ಣಲ್ಲಿ ಸಲ್ಫರ್ ಡೈ ಆಕ್ಸೈಡ್, ಇಂಗಾಲದ ಡೈ ಆಕ್ಸೈಡ್ ಮತ್ತು ಆಮ್ಲಜನಕವಿದೆಯಂತೆ.ಹಿಮದ ಅಂಶವೂ ಇಲ್ಲಿ ಪತ್ತೆಯಾಗಿದೆಯಂತೆ.ಭೂಮಿ ಬಿಟ್ಟರೆ ಮಂಗಳವೊಂದೇ 24 ಗಂಟೆಗಳನ್ನೊಳಗೊಂಡ ದಿನವನ್ನು ಹೊಂದಿದೆ. ಇಲ್ಲಿನ ತಾಪಮಾನ ಕೂಡ ಭೂಮಿಯನ್ನು ಹೋಲುತ್ತದೆ.ಎಂಬುದೆಲ್ಲಾ ಈ ಕುತೂಹಲವನ್ನು ಇನ್ನೂ ಕೆರಳಿಸಿದೆ.
ಅಮೇರಿಕಾ ಬಹುದೊಡ್ಡ ಪ್ರಯೋಗಶಾಲೆಯಾದ ಕ್ಯುರಿಯೋಸಿಟಿಯನ್ನೇ ಮಂಗಳನ ಅಂಗಳದಲ್ಲಿ ಬಿಟ್ಟಿರುವಾಗ ಈ ಚಿಕ್ಕ ಉಪಗ್ರಹ ಉಡಾವಣೆಯ ಅವಶ್ಯಕತೆ ಇತ್ತಾ?
ಎಂಬ ಸಂದರ್ಶಕನೊಬ್ಬನ ಪ್ರಶ್ನೆಗೆ , ೧೯೬೯ ರಲ್ಲಿ ಚಂದ್ರನ ಮೇಲೆ ಮಾನವ ಹೆಜ್ಜೆ ಇಟ್ಟಾಗಿತ್ತು ಆದರೆ ನಂತರದ ದಿನಗಳಲ್ಲಿ ಬಾಹ್ಯಾಕಾಶ ವಿಜ್ನಾನದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳು ಹಲವಾರು ನೌಕೆಗಳನ್ನು ಚಂದ್ರನತ್ತ ಕಳಿಸಿವೆ.ಆದರೆ ಭಾರತ ೨೦೦೮ರಲ್ಲಿ ಕಳುಹಿಸಿದ "ಚಂದ್ರಯಾನ" ಉಪಗ್ರಹ ಮೊದಲ ಬಾರಿಗೆ ಚಂದ್ರನಲ್ಲಿ ನೀರಿರುವುದನ್ನು ಖಾತ್ರಿಗೋಳಿಸಿತ್ತು ಎಂದು ಖ್ಯಾತ ವಿಜ್ನಾನಿ ಯು.ಆರ್.ರಾವ್ ಅವರು ಪ್ರತಿಕ್ರಿಯಿಸುತ್ತಾರೆ.ಅರ್ಥಾತ್ ಹುಡುಕಾಟಕ್ಕೆ ಹೋದವರು ಲೆಕ್ಕಕ್ಕಿಲ್ಲ, ಹುಡುಕಾಡಿದ್ದಷ್ಟೇ ಲೆಕ್ಕಕ್ಕೆ ಎಂಬ ತತ್ವ ಪ್ರತಿಯೊಬ್ಬ ವಿಜ್ನಾನಿಯದ್ದು.
ಹಾಗಾದರೆ ಉದ್ದೇಶ?
ಐತಿಹಾಸಿಕ ಮಂಗಳ ಗ್ರಹದ ಛಾಯಾಚಿತ್ರ-ಗಳನ್ನು ತೆಗೆಯು­ವುದು ಮಾತ್ರವೇ ಈ ಯೋಜ-ನೆಯ ಉದ್ದೇಶವಲ್ಲ. ಇದು ನಾವು ಯುವ ಪೀಳಿಗೆಗೆ ಕೊಡುವ ಅತ್ಯಮೂಲ್ಯ ಕಾಣಿಕೆಯಾಗಿದೆ. ಯುವಜನತೆಗೆ ಇದೊಂದು ಅವಕಾಶ ಹಾಗೂ ಸವಾಲು ಕೂಡ ಹೌದು.ಹಾಗಾದರೆ ಅದರ ಉದ್ದೇಶ-
ಮಂಗಳನಲ್ಲಿ ವಾಸಯೋಗ್ಯ ವಾತಾವರಣವಿದೆಯೇ? ಮಂಗಳನಲ್ಲಿ ಈ ಹಿಂದೆ ಜೈವಿಕ ಜಗತ್ತು ಇತ್ತೇ ?ಅಲ್ಲಿ ಭೂಮಿಯ ಬಕಾಸುರನಿಗೆ ಅವಶ್ಯವಾದ ಇಂಧನಗಳು ಸಿಗಬಹುದೇ?. ಹಾಗಾದರೆ ಅಲ್ಲಿರುವ ವಾತಾವರಣ ಯಾವುದು? ಮತ್ತು ಅಲ್ಲಿ ಬದುಕಬೇಕಾದರೆ ಮಾನವನಿಗೆ ಅವಶ್ಯಕವಿರುವ ಸಂಶೋದನೆಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವುದರ ಜೊತೆಗೆ ನಮ್ಮ ತಂತ್ರಜ್ನಾನವನ್ನು ನಾವೇ ಪಣಕ್ಕೊಡ್ಡುವ ಪ್ರಕ್ರಿಯೆ.
ಹಾಗಾದರೆ ಮಂಗಳಯಾನದ ನಂತರದ ಸಾಧ್ಯತೆಗಳೇನು?

೧)ಅಲ್ಲಿ ಜೀವಕಣಗಳ ಇರುವಿಕೆಗೆ ಪೂರಕವಾಗುವ ಡ್ಯುಟೇರಿಯಂ ಮತ್ತು ಜಲಜನಕದ ಪ್ರಮಾಣ ಇದ್ದರೆ ಎಷ್ಟಿರಬಹುದು ಎಂದೆಲ್ಲಾ ಈ ಬಾಹ್ಯಾಕಾಶ ನೌಕೆ ತಿಳಿದುಕೊಳ್ಳಲಿದೆ. ಅದರಲ್ಲಿರುವ ಮಿಥೇನ್ ಸೆನ್ಸರ್, ಅಲ್ಲಿ ಯಾವುದಾದರೂ ಅನಿಲದ ಮೂಲವಿದೆಯೇ ಎಂದು ತಿಳಿದುಕೊಳ್ಳಲಿದೆ. ಅದರಲ್ಲಿರುವ ಕ್ಯಾಮೆರಾ ಚಿತ್ರಗಳನ್ನು ತೆಗೆಯಲಿದ್ದರೆ, ಥರ್ಮಲ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್, ಅಲ್ಲಿನ ತಾಪಮಾನ, ಖನಿಜಾಂಶ, ಮಣ್ಣಿನಾಂಶ ಇತ್ಯಾದಿಯ ಇರುವಿಕೆಯನ್ನು ತಿಳಿದುಕೊಳ್ಳಲಿದೆ.


೨)ಮಂಗಳದ ಮೇಲೆ ಹೆಮಟೈಟ್, ಜಿಯೊತೈಟ್ ಮುಂತಾದ ಖನಿಜಗಳು ಕಂಡುಬಂದಿವೆ. ಸಾಮನ್ಯವಾಗಿ ಈ ಖನಿಜಗಳು ನೀರಿನ ಉಪಸ್ಥಿತಿಯಲ್ಲಿ ಮಾತ್ರ ರೂಪುಗೊಳ್ಳುತ್ತವೆ.ನಮ್ಮ ನೌಕೆಯಲ್ಲಿರುವ ಲೈಮನ್ ಆಲ್ಫಾ ಫೋಟೊಮೀಟರ್ ಡ್ಯೂಟೀರಿಯಮ್ ಹಾಗೂ ಜಲಜನಕದ ಕಣಗಳ ಅನುಪಾತವನ್ನು ಲೆಕ್ಕ ಹಾಕಲಿದೆ. ಇದರಿಂದ ಆ ಗ್ರಹದಿಂದ ನೀರು ಹೇಗೆ ಆವಿಯಾಯಿತು ಎಂಬುದನ್ನು ತಿಳಿದುಕೊಳ್ಳುವುದು ಸಾಧ್ಯವಾಗಲಿದೆ.ಎಕೆಂದರೆ ಇಲ್ಲಿಯ ವರೆಗೆ ತಿಳಿದ ಮಾಹಿತಿಯ ಪ್ರಕಾರ ಅಲ್ಲಿ ಅತಿ ಶೈತ್ಯ ಮತ್ತು ತೆಳುವಾದ ವಾತಾವರಣವಿರುವ ಕಾರಣ ಅಲ್ಲಿ ನೀರು ಸ್ವಲ್ಪ ಶಾಖ ಹೆಚ್ಚು ಮಾಡಿದರೂ ತಕ್ಷಣ ಘನಸ್ಥಿತಿಯಿಂದ ಆವಿಸ್ಥಿತಿಗೆ ಬದಲಾಗುತ್ತದೆ.ಹಾಗಾದರೆ ಅಲ್ಲಿ ನೀರನ್ನು ಮತ್ತೆ ನಾವು ದ್ರವ ರೂಪದಲ್ಲಿ ಪಡೆಯಬಹುದೇ, ಪಡೆಯಬಹುದಾದಲ್ಲಿ ಅದಕ್ಕೆ ಪೂರಕ ಕ್ರಮಗಳೇನು?ಎಂಬುದರ ಅರಿವು ಸಿಗಬಹುದು.


೩) ಮಂಗಳನ ಭೂಮ್ಯಾಳದಲ್ಲಿ ಇಂಧನ ಖನಿಜಗಳು ಪತ್ತೆಯಾದಲ್ಲಿ ಅದು ಮುಂದಿನ ಮಾನವಸಹಿತ ಮಂಗಳ ಯಾನಕ್ಕೆ ಇಂಧನವಾಗಬಹುದು ಎಂಬ ದೊಡ್ಡ ನೀರಿಕ್ಷೆ ನಮ್ಮ ವಿಜ್ನಾನಿಗಳದ್ದು.ಅದರ ಜೊತೆಗೆ ಮುಂದೆ ಮಾನವನ ಆಶಾಕುಟುಂಬಕಲ್ಯಾಣಕ್ಕೆ ಇವೇ ಸೌದೆಯಾಗಬಹುದೇ ಎಂಬ ಆಸೆಯೂ ಇದೆ.


೪) ಮಂಗಳನಲ್ಲಿ ಬಾರತದ ಈ ಬಾನಬಂಡಿಯ ಸಾಗುದಾರಿಯು ಮಂಗಳನ ಸುತ್ತ ಹೆಚ್ಚು ದೂರ ಹೋಗಿಬರುವ ಮೊಟ್ಟೆಯಾಕಾರದ ರೀತಿಯಲ್ಲಿದ್ದು (elliptical ) ಜೊತೆಗೆ ಇದರಲ್ಲೊಂದು ಹೆಚ್ಚಿನ ಗುಣಮಟ್ಟದ ಬಣ್ಣದ ತಿಟ್ಟಕವೂ (high resolution color camera) ಇದೆ. ಇದರಿಂದ ಮಂಗಳನ ಪೂರ್ಣವಾದ ಬಣ್ಣದ ಛಾಯಾಚಿತ್ರವನ್ನು (full-disk color imagery) ಅನೇಕ ಬಾರಿ ಪಡೆಯಲಾಗುತ್ತಿದೆ.ಈ ತಿಟ್ಟಗಳು ಮಂಗಳನ ನೆಲದ ಮೇಲಿನ ವಿವರಗಳ ಬಗ್ಗೆ ಆಳವಾದ ಅರಿಮೆ ಹೊಂದಬಯಸುವವರಿಗೆ ಅನುಕೂಲವಾಗಿವೆ. ಇದೇಕೆಂದರೆ ಇಲ್ಲಿಯವರೆಗೆ ಮಂಗಳನ ಬಳಿ ಹೋದ ಬೇರೆ ದೇಶಗಳ ಬಾನಬಂಡಿಗಳು ಕೆಲವೇ ಪೂರ‍್ತಿಬಿಲ್ಲೆಯ ತಿಟ್ಟಗಳನ್ನು ಪಡೆದಿದ್ದು ತಾವು ಇಳಿಯುವ ತಾಣದ ಬಳಿ ನೇರವಾಗಿ ಕೆಳಗೆ ಕಾಣುತ್ತಿದ್ದ ನೆಲದ ತಿಟ್ಟಗಳನ್ನು ಮಾತ್ರವೇ ಹೆಚ್ಚಾಗಿ ಕಳಿಸುತ್ತಿದ್ದವು.


೫) ಮಂಗಳಯಾನದ ಹಾದಿಯಲ್ಲೇ ಸೈಡಿಂಗ್‌ಸ್ಪ್ರಿಂಗ್‌ ಎಂಬ ಧೂಮಕೇತುವಿನ ಬಾಲದ ಭಾಗವು ಮಂಗಳನ ವಾತಾವರಣವನ್ನು ಸ್ಪರ್ಶಿಸಲಿದೆ. ಈ ಸಂದರ್ಭವನ್ನು ಬಳಸಿಕೊಂಡು ಧೂಮಕೇತುವಿನ ಬಗ್ಗೆ ಅಧ್ಯಯನ ನಡೆಸಬಹುದಾಗಿದೆ. ಜತೆಗೆ ಧೂಮಕೇತುವು ನೌಕೆಯ ಮೇಲೆ ಏನಾದರೂ ಪರಿಣಾಮ ಬೀರಲಿದೆಯೇ ಎಂಬುದಕ್ಕೂ ಉತ್ತರ ಸಿಗಲಿದೆ.ಇದರ ಅಧ್ಯಯನದಿಂದ ಆ ಜಾತಿಯ ಧೂಮಕೇತುಗಳು ಭೂಮಿಯ ಮೇಲೆ ಉಂಟುಮಾಡುವ ಪರಿಣಾಮವನ್ನೂ ತಿಳಿಯಬಹುದು.


೬)ಮಂಗಳಗ್ರಹದಲ್ಲಿ ಜೀವಿಗಳು ವಾಸಿಸುತ್ತಿರುವುದಕ್ಕೆ ಕುರುಹಾಗಿ ಮಿಥೇನ್ ಅನಿಲದ ಇರುವಿಕೆಯನ್ನು ಪತ್ತೆ ಹಚ್ಚುವುದು.ಅಂದರೆ ಮಿಥೇನ್ ಅನಿಲ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿ ಆಗುವುದು ಜೀವಿಗಳಲ್ಲಿ ಉಂಟಾಗುವ ಜೀವರಾಸಾಯನಿಕ ಕ್ರ‍ಿಯೆಯಿಂದ. ಆದ ಕಾರಣ ಮಿಥೇನ್ ಪತ್ತೆಯಾದಲ್ಲಿ ಜೈವಿಕ ಅಸ್ತಿತ್ವವನ್ನು ಮಂಗಳನ ಆಳದಲ್ಲಿ ಕೆದಕಬಹುದು.ಇಲ್ಲವಾದಲ್ಲಿ ಮಂಗಳನ ಭೂಮಿಯಾಳದ ಅಧ್ಯಯಯನ ನಿಶ್ಪ್ರಯೋಜಕ ಎಂದು ಸಾಬೀತಾಗುತ್ತದೆ.ಹಾಗೆಯೇ ಮೀಥೇನ್ ಮತ್ತಿತರ ಅನಿಲಗಳನ್ನು ಬಳಸಿ ಮಾನವ ಸಾವಯವ ಸಂಯುಕ್ತಗಳನ್ನು ಪಡೆಯಬಹುದೇ ಎಂಬುದರ ಕಡೆ ಸಂಶೋಧನೆ ಸಾಗಲಿದೆ.



೭) ಇಲ್ಲಿಯವರೆಗಿನ ಮಾಹಿತಿಯ ಪ್ರಕಾರ ಮಂಗಳದ ಕೆಂಪು ಬಣ್ಣಕ್ಕೆ ಕಾರಣ ಕಬ್ಬಿಣ.ಆದರೆ ಅಲ್ಲಿ ಭೂಮಿಯಂತೆ ಕಾಂತಕ್ಷೇತ್ರವಿಲ್ಲ ಆದರೆ ನಮ್ಮ ಕ್ಯಾಮೆರಾಗಳ ಕಣ್ಣಿಗೆ ಧ್ರುವಪ್ರಭೆಗಳು ಕಂಡುಬಂದಿವೆ ಅಂದರೆ ಅಲ್ಲಲ್ಲಿ ಕಬ್ಬಿಣದ ಸಾಂದ್ರತೆ ಜಾಸ್ತಿ ಇದ್ದು ಕಾಂತಕ್ಷೇತ್ರ ಉಂಟಾಗಿರಬಹುದಾಗಿಯೂ ಊಹಿಸಲಾಗಿದೆ.ಇದರ ಅಧ್ಯಯನ ಎಷ್ಟು ಅವಶ್ಯಕವೆಂದರೆ ಸೂರ್ಯನ ಅತಿ ಉಗ್ರ ಕಿರಣಗಳಿಂದ ಇತರೇ ವಿಶ್ವಕಿರಣಗಳಿಂದ ನಮ್ಮನ್ನು ಭೂಮಿಯಲ್ಲಿ ರಕ್ಷಿಸುತ್ತಿರುವುದೇ ನಮ್ಮ ಭೂಕಾಂತತ್ವ.ಇದು ಮುಂದಿನ ಜೀವವಸಕ್ಕೆ ಎರಗಬಹುದಾದ ಅಪಾಯಗಳನ್ನು ನಿರ್ಧರಿಸುವಲ್ಲಿ ಸಹಾಯ ಮಾಡುತ್ತವೆ.

೮)ಅತಿ ಪ್ರಾಮುಖ್ಯ ವಿಷಯವೆಂದರೆ ಒಂದಿರಂದ ಮತ್ತೊಂದು ಅಧ್ಯಯನ.ಅಂದರೆ ಅತಿ ಹೆಚ್ಚಿನ ಗುಣಮಟ್ಟದ ದೂರದರ್ಶಕಗಳನ್ನು ಮಂಗಳನ ಅಂಗಳದಲ್ಲಿರಿಸಿ ಅಲ್ಲಿಂದ ವಿಶ್ವವನ್ನು ವೀಕ್ಷಿಸಿ ಮಹಾಭಾರತದ ಸಂಜಯನಂತೆ ದಿವ್ಯದೃಷ್ಟಿಯನ್ನು ಹೊಂದುವ ಕಲ್ಪನೆ ಇದೆ.ಇನ್ನೂ ವಿವರವಾಗಿ ಹೇಳಬೇಕೆಂದರೆ " ಮಂಗಳನಿಂದ ಖಗೋಳ ಅಧ್ಯಯನ".



೯) ಮಂಗಳೂರು ಬಸ್ ನಿಲ್ದಾಣ್ದಂತೆ ಮಂಗಳ ನೌಕಾ ನಿಲ್ದಾಣ.ಬಹುಶಃ ನಿಮಗೆಲ್ಲಾ ಆಶ್ಚರ್ಯವೆನಿಸಬಹುದು ಆದರೆ ಅದು ನಿಜ.ಈಗಾಗಲೇ ಮಾನವನು ಅಂತರಿಕ್ಷದಲ್ಲಿ ಸಹಸ್ರಾರು ಟನ್ ಭಾರವಿರುವ "ಕೃತಕ ನೌಕಾ ನಿಲ್ದಾಣ"ವನ್ನು ನಿರ್ಮಿಸಿಕೊಂಡಿದ್ದಾನೆ.ಆದರೆ ಮುಂದೊಂದು ದಿನ ಮನುಷ್ಯನ ಅಂತರಿಕ್ಷದ ಅಲೆದಾಟದಲ್ಲಿ ಮಂಗಳಗ್ರಹವು ಒಂದು ನೌಕಾ ನಿಲ್ದಾಣವೂ ಇಂಧನ ಬಂಕ್ ಆಗಿ ನಿರ್ಮಾಣಗೊಂಡರೆ ವಿಶೇಶವೇನಲ್ಲ.

೮)ನೌಕೆಯೊಂದನ್ನು ದೂರದ ಆಕಾಶಕಾಯದ ಕಕ್ಷೆಗೆ ಸೇರಿಸುವಾಗ ಎಷ್ಟೇ ನಿಖರವಾಗಿ ಲೆಕ್ಕಾಚಾರ ಹಾಕಿದ್ದರೂ ಯಾವ ಕ್ಷಣ ಏನಾಗುತ್ತದೆಂದು ಹೇಳಲಾಗದು. ದೂರದ ಬಾಹ್ಯಾಕಾಶದಲ್ಲಿ ಹಲವಾರು ರೀತಿಯ ಅಜ್ಞಾತ ಸೆಳೆತಗಳು ಇರುವುದು ಇದಕ್ಕೆ ಕಾರಣ. ಈ ಯಾವುದೇ ಸೆಳೆತದಿಂದಾಗಿ ನೌಕೆಯ ಪಥದಲ್ಲಿ ಮೈಕ್ರೋಡಿಗ್ರಿಯಷ್ಟು ವ್ಯತ್ಯಾಸವಾದರೂ ನೌಕೆಯ ಅಂತರ 600 ಕಿಲೋ ಮೀಟರ್‌ಗಳಷ್ಟು ವ್ಯತ್ಯಾಸವಾಗಿ ಅದು ದಿಕ್ಕುತಪ್ಪುವ ಆಂತಕ ಇರುತ್ತದೆ ಆದ ಕಾರಣ ಈ ಮಂಗಳ ಯಾನವು ನಮ್ಮ ಲೆಕ್ಕಾಚಾರ ಸರಿಇರುವುದನ್ನು ದೃಢಪಡಿಸುವುದರ ಜೊತೆಗೆ ಇನ್ನೂ ಹೆಚ್ಚಿನ ತಂತ್ರಜ್ನಾನ ಮತ್ತು ಆಧುನೀಕರಣದ ಸಾಧ್ಯತೆಗಳ ಬಗ್ಗೆ ಅರಿವು ಮಾಡಿಕೊಡಲಿದೆ.


೯)ಮಂಗಳಯಾನಕ್ಕಾಗಿ ಲಿಕ್ವಿಡ್‌ಅಪೊಜಿ ಮೋಟಾರ್‌(ಲ್ಯಾಮ್‌) ಎಂಜಿನ್‌ತಯಾರಿಸಿದ್ದ ಇಸ್ರೊ ಈಗ ಕ್ರಯೋಜನಿಕ್‌ಹಾಗೂ ಸೆಮಿ ಕ್ರಯೋಜನಿಕ್‌ಎಂಜಿನ್‌ತಯಾರಿಕೆಯಲ್ಲಿ ನಿರತವಾಗಿದೆ. ಸೆಮಿ ಕ್ರಯೋಜನಿಕ್‌ಎಂಜಿನ್‌2017ರ ವೇಳೆಗೆ ಬಾಹ್ಯಾಕಾಶ ಯಾನದಲ್ಲಿ ಬಳಕೆಯಾಗುವ ನಿರೀಕ್ಷೆ ಇದೆ. ದ್ರವ ಜಲಜನಕದ ಬದಲಿಗೆ ಸೀಮೆಎಣ್ಣೆ ಬಳಸಿಕೊಂಡು ಕಾರ್ಯನಿರ್ವಹಿಸುವ ಇದು ಕ್ರಯೋಜನಿಕ್‌ಎಂಜಿನ್‌ಗಿಂತ ಹತ್ತು ಪಟ್ಟು ಹೆಚ್ಚು ದಕ್ಷವಾದದ್ದು! ಇವುಗಳ ನೂಕುಬಲ ಅಪಾರ. ಮಾನವ ಸಹಿತ ಬಾಹ್ಯಾಕಾಶ ಯಾನಗಳಲ್ಲಿ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರುವುದರಲ್ಲಿ ಈ ಮಾದರಿಯ ಎಂಜಿನ್ ಹೆಚ್ಚು ವಿಶ್ವಾಸಾರ್ಹ ಎನ್ನಲಾಗಿದೆ.


೧೦)ನೌಕೆಯಲ್ಲಿ ಹಲವು ಹಂತಗಳ ಸ್ವಯಂಚಾಲನಾ ತಾಂತ್ರಿಕತೆಯನ್ನು ಅಳವಡಿಸಲಾಗಿತ್ತು. ಬಹುತೇಕ ಇವೆಲ್ಲವೂ ಈ ಯಾನದಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು ಎಲ್ಲವೂ ಸಮರ್ಪಕವಾಗಿರುವುದು ದೃಢಪಟ್ಟಿದೆ. ಇದೇ ಸ್ವಯಂಚಾಲನಾ ತಂತ್ರಜ್ಞಾನವನ್ನು ಭವಿಷ್ಯದ ಸಂವಹನದಲ್ಲಿ ಮತ್ತು ದೂರಸಂವೇದಿ ಉಪಗ್ರಹಗಳಲ್ಲಿ ಅಳವಡಿಸಲು ಇದು ಪ್ರೇರಣೆ ಆಗಬಹುದು. ಉಪಗ್ರಹವೊಂದನ್ನು ಉಡಾಯಿಸಿದಾಗ ಯಾವ್ಯಾವ ಸಂಗತಿಗಳನ್ನು ಭೂಮಿಯ ಮೇಲಿನಿಂದ ನಿಯಂತ್ರಿಸಲಾಗುತ್ತಿತ್ತೋ ಅವೆಲ್ಲವನ್ನೂ ಈಗ ನೌಕೆಯ ನಿಯಂತ್ರಣಕ್ಕೆ ಒಳಪಡಿಸಬಹುದಾಗಿದೆ. ಮುಂದಿನ ಖಗೋಳ ಸಾಹಸ ಯಾನಗಳಿಗೆ ಇದರಿಂದ ಅನುಕೂಲವಾಗಲಿದೆ.


೧೧)ಇನ್ನು ಈ ಯಾನದ ಯಶಸ್ಸು ಆರ್ಥಿಕತೆಯ ದೃಷ್ಟಿಯಿಂದಲೂ ನಮಗೆ ಕೆಲವು ಅವಕಾಶಗಳನ್ನು ಸೃಷ್ಟಿಸಬಹುದು. ಅಮೆರಿಕದ ‘ನಾಸಾ’ ಸೇರಿದಂತೆ ಜಗತ್ತಿನ ಹಲವಾರು ಅಂತರಿಕ್ಷ ಕೇಂದ್ರಗಳನ್ನು ಹಲವಾರು ಕೆಲಸಗಳನ್ನು ಹೊರಗುತ್ತಿಗೆ ನೋಡಲು ಈಗ ಎದುರು ನೋಡುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತದ ಇಸ್ರೊವು ಮೊದಲ ಯತ್ನದಲ್ಲೇ ಈ ಯಾನದಲ್ಲಿ ಯಶಸ್ಸು ಕಂಡಿದ್ದು ಅದರ ಸೇವೆಗೆ ಬೇಡಿಕೆಯನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಇದರಿಂದಾಗಿ ಭಾರತದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.


ಮಂಗಳ ಗ್ರಹ ಚಿತ್ರ ಮೂಲ: ವಿಕಿಪೀಡಿಯ

ಕೇವಲ ಒಂದು ಉಪಗ್ರಹ ಯೋಜನೆಯ ಉದ್ದೇಶವು ಸಾಧ್ಯತೆ ಆಗಬೇಕಾದಲ್ಲಿ ಅದಕ್ಕೆ ಈ ಹಿಂದೆಯೇ ಸವಾಲುಗಳನ್ನು ಎದುರಿಸಿರಬೇಕು ಅಂತೆಯೇ ಮುಂಬರುವ ಸವಾಲುಗಳೀಗು ಸಜ್ಜಾಗಿರಲೇಬೇಕು.ಐತಿಹಾಸಿಕ ಸವಾಲುಗಳನ್ನು ದಾಟಿ ನಾವೀಗ ಮಂಗಳಯಾನವನ್ನು ಯಶಸ್ವಿ ಆಗಿ ಮುಗಿಸಿದ್ದೇವೆ ಹಾಗಾದರೆ ಇನ್ನು ಮುಂದೆ ಎರಗುವ ಸವಾಲುಗಳನ್ನೋಮ್ಮ್ಮೆ ಕಣ್ಣು ಹಾಯಿಸೋಣ.

೧) ಮಂಗಳದ ಮೇಲೆ ಕಾಂತಕ್ಷೇತ್ರ ಇಲ್ಲದಿರುವುದು ಹಾಗೂ ಅತಿ ವಿರಳವಾದ ವಾಯುಮಂಡಲ. ಇವುಗಳ ಪರಿಣಾಮ ಮೇಲ್ಮೈನ ಮೇಲೆ ಶಾಖದ ಸಂವಹನ ಉಂಟಾಗದಿರುವುದು, ಸೂರ್ಯನ ವಿಕಿರಣ ಮತ್ತು ಉಲ್ಕೆಗಳಿಂದ ರಕ್ಷಣೆ ಸಿಗದಿರುವುದು.ಇದಕ್ಕೆ ಪರಿಹಾರ ಕಂಡುಹಿಡಿಯಬೇಕಾಗಿದೆ.


೨) ಮಂಗಳನ ಮೇಲಿನ ಉಷ್ಣತೆಯ ಪಕ್ಕಾ ಮಾಹಿತ ಸಿಕ್ಕ ಕಾರಣ ಅಲ್ಲಿನ ಉಷ್ನತೆಗೆ ಒಗ್ಗಿಕೊಳ್ಳುವ ಜೈವಿಕ ಮಾರ್ಪಾಡುಗಳ ಕುರಿತು ಅಥವಾ ಸಸ್ಯ ಸಾಮ್ರಾಜ್ಯದ ಬೆಳವಣಿಗೆಯ ಕುರಿತು ಸಂಶೋದನೆ ಆಗಬೇಕು.


೩)ಮಂಗಳದಲ್ಲಿ ಅಗ್ನಿಪರ್ವತಗಳ ಚಟುವಟಿಕೆಗಳು ಸಂಪೂರ್ಣವಾಗಿ ಅಥವಾ ಬಹುಮಟ್ಟಿಗೆ ನಿಂತುಹೋಗಿವೆ. ಇದರ ಕಾರಣದಿಂದಾಗಿ ಮೇಲ್ಮೈ ಮತ್ತು ಗ್ರಹದ ಒಳಭಾಗಗಳ ನಡುವೆ ಖನಿಜಗಳ ಚಲನೆ ನಡೆಯುತ್ತಿಲ್ಲ.ಇವು ಮಂಗಳವನ್ನು ಕೇವಲ ಕಪ್ಪು ಶಿಲೆಯಾಗಿಯೇ ಉಳಿಸಿಬಿಡುವ ಆತಂಕವಿದೆ.


೪) ಮಂಗಳನಲ್ಲಿಗೆ ಈಗ ಕೇವಲ ಸ್ವಯಂ ಚಾಲಿತ ರೋಬೋಟ್ಗಳು ಕಾರ್ಯನಿರ್ವಹಿಸುತ್ತಿದ್ದು ಮಾನವ ಸಹಿತ ಮಂಗಳಯಾನ ಮಾಡಬೇಕಾದರೆ ಅದಕ್ಕೆ ಬೇಕಾದ ಸುರಕ್ಷತೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಅತ್ಯುಚ್ಚ ಮಟ್ಟದ ತಂತ್ರಜ್ನಾನವುಳ್ಳ ನೌಕೆಯ ಅವಶ್ಯಕತೆ ಇದ್ದು ಈವರೆಗಿನ ಲೋಹಗಳು ತಂತ್ರಜ್ನಾನದಲ್ಲಿ ಸಶಕ್ತವಾಗದೇ ಇರಬಹುದು.


೫) ಅತಿ ನಿಖರವಾದ ಅಂತರಿಕ್ಷದ ಇನ್ನಿತರ ಕಾಯಗಳ ಜ್ನಾನವಿರದಿದ್ದಲ್ಲಿ ನಮ್ಮ ನೌಕೆಯ ಪಥದಲ್ಲಿ ಉಳಿದ ಆಕಾಶಕಾಯಗಳು ತೊಂದರೆ ಉಂಟುಮಾಡಿದಲ್ಲಿ ನೌಕೆಯು ನಿಶ್ಕ್ರೀಯಗೊಳ್ಳುವ ಸಾಧ್ಯತೆ ಇರುತ್ತದೆ.


೬) ಮಂಗಳನ ಅಧ್ಯಯನದಿಂದ ನಮ್ಮ ಭೂಮಿಗೆ ಶಕ್ತಿಯಮೂಲಗಳನ್ನು ಮತ್ತು ಅಲ್ಲಿನ ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ತಂದು ಅಧ್ಯಯನಮಾಡುವಲ್ಲಿ ವಿಜ್ನಾನಿಗಳು ಮತ್ತು ತಂತ್ರಜ್ನರು ಮುಂದಾಗಬೇಕು.


                              
ಆಲ್ ದಿ ಬೆಸ್ಟ್ ಇಂಡಿಯಾ!

ಲೇಖಕ: ದಿನೇಶ್ ಹೆಗಡೆ

ಇಮೇಲ್:dineshvh.hegde257@gmail.com  

ವಾಟ್ಸ್ ಆಪ್ ನಲ್ಲಿ ಶೇರ್ ಮಾಡಿ

Comments

Popular posts from this blog

ಉದ್ದ ಅಳತೆಗಳ ಮೂಲಮಾನ

ಗಣಿತಶಾಸ್ತ್ರದ ಪ್ರಾಮುಖ್ಯತೆ!

ಭೌತಶಾಸ್ತ್ರ ಏಂದರೇನು?