ಗಣಿತಶಾಸ್ತ್ರದ ಪ್ರಾಮುಖ್ಯತೆ!

ನಮಗೆ ಜೀವನದಲ್ಲಿ ಬೇರೆ ಬೇರೆ ರೀತಿಯಾದಂತಹ ಆಸಹಿಷ್ಣುತೆ (intolerance) ಇರುತ್ತದೆ. ಉದಾಹರಣೆಗೆ ನಮ್ಮಲ್ಲಿ ಹಲವರಿಗೆ ಹಾಲಿನಲ್ಲಿ ಇರುವಂತಹ ಲ್ಯಾಕ್ಟೋಸ್ ಎಂಬ ದ್ವಶರ್ಕರ ಮೈಗೆ ಒಗ್ಗುವುದಿಲ್ಲ. ಇದಕ್ಕೆ (Lactose Intolerance) ಎಂದು ಕರೆಯುತ್ತಾರೆ.
ಹಾಗೆ ವಿಧ್ಯರ್ಥಿ ಸಮುದಾಯದಲ್ಲೂ ನಮಗೆ ಒಗ್ಗದ ವಿಷಯಗಳು, ಪರಿಕಲ್ಪನೆಗಳು, ಸಿದ್ಧಾಂತಗಳು, ಅಧ್ಯಾಯಗಳು ಇರುತ್ತವೆ. ಅದು ಸರ್ವೇಸಾಮಾನ್ಯ. ಎಲ್ಲರಿಗೂ ಎಲ್ಲವೂ ಇಷ್ಟವಾಗಬೇಕು ಎಂಬ ನಿಯಮವೇನು ಇಲ್ಲ, ಅಲ್ವೆ?!? ಹೀಗೆ ಹಿಡಿಸದ ವಿಷಯಗಳ ಪಟ್ಟಿಯಲ್ಲಿ ಶಾಲಾ ತರಗತಿಗಳು, ಬೆಳಗಿನ ಪ್ರಾರ್ಥನಾ ಸಭೆಗಳು, ಪರೀಕ್ಷೆಗಳು, ಶೈಕ್ಷಣಿಕ ವಿಷಯಗಳು, ಹತ್ತು ಹಲವಾರು ಇವೆ. ಅವುಗಳಲ್ಲಿ ಥಟ್ ಅಂಥ ತಲೆಗೆ ಹೊಳೆಯುವ ಕೆಲ ವಿಷಯಗಳಲ್ಲಿ ಗಣಿತವು ಉನ್ನತ ಸ್ಥಾನದಲ್ಲಿರುತ್ತದೆ. ಹೌದು, ನಮಲ್ಲಿ ಹಲವರಿಗೆ ಶಾಲೆಯ ದಿನಗಳಿಂದಲೂ ಗಣಿತ ಎಂದರೆ ಸ್ವಲ್ಪ ಕಷ್ಟವೇ ಸರಿ. ಇದಕ್ಕೆ ಕರಣಗಳು ಹಲವು. ನಮ್ಮ ಶಾಲಾ ಪದ್ಧತಿಯಾಗಿರಬಹುದು, ಪಠ್ಯಕ್ರಮವಾಗಿರಬಹುದು, ಪಾಠ ಮಾಡುವ ಗುರುಗಳೂ ಆಗಿರಬಹುದು. ಕರಣವೇನೇ ಇರಲಿ ಗಣಿತದ ಹೆಸರು ಕೇಳುತ್ತಿದ್ದಂತೆ ನಡುಕ, ಭಯಾ ಗಾಭರಿ, ಆತಂಕ ಎಲ್ಲವೂ ಶುರು!!! ಇವತ್ತಿನ ವಿದ್ಯಾರ್ಥಿ ಸಮುದಾಯವನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಗಳಲ್ಲಿ ಇದೂ ಒಂದು. ಸಮಸ್ಯೆಗೆ ಪರಿಹಾರ ಹುಡುಕುವ ಜವಾಬ್ದಾರಿ ಪಾಠ ಮಾಡುವ ಗುರುಗಳ ಮೇಲೆ ಎಷ್ಟು ಇದೆಯೋ ಅಷ್ಟೇ ಪ್ರಮಾಣ ಪೋಷಕರ ಮೇಲೆ, ಶಾಲಾ ಅಡಳಿತ ವರ್ಗದ ಮೇಲೆ ಹಾಗೂ ವಿದ್ಯಾರ್ಥಿಗಳ ಮೇಲೆ ಇದೆ.
ವಿದ್ಯಾರ್ಥಿಗಳಾದ ನಾವು ನಮ್ಮ ಕಡೆಯಿಂದ ವಿದ್ಯಾಪ್ರಪ್ತಿಗೆ ಒತ್ತು ಕೊಟ್ಟು ಸತತವಾಗಿ ಪ್ರಯತ್ನಿಸುತ್ತಿರಬೇಕು. ಗಣಿತ ಬರೀ ನಮ್ಮ ಪಠ್ಯ ಪುಸ್ತಕಗಳಿಗೆ, ಮಾರ್ಕ್ಸ್ ಕಾರ್ಡ್ ಗಳಿಗೆ , ಗ್ರೇಡ್ಗಳಿಗೆ ಸೀಮಿತವಾಗಿಲ್ಲ. ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಸಂದರ್ಭಗಳಲ್ಲಿ ಗಣಿತದ ನೆರವು ಬೇಕಾಗುತ್ತದೆ. ಸಾಮಾನ್ಯ ಗಣಿತ ಅರ್ಥಾತ್ ಕೂಡೋದು, ಕಳೆಯೋದು, ಗುಣಾಕಾರ ಬೇಕೇ ಬೇಕು, ಅದನ್ನು ನಾವುಗಳು ಹೇಗೋ ನಿರ್ವಹಿಸುತ್ತೇವೆ. ಗಣಿತ ಅಲ್ಲಿಗೆ ಸೀಮಿತವಲ್ಲ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಭೂಗೋಳ, ಜೀವಶಾಸ್ತ್ರ ಇನ್ನಿತರ ವಿಜ್ಞಾನದ ಶಾಖೆಗಳು, ಎಂಜಿನಿಯರಿಂಗ್ ಶಾಖೆಗಳು, ವೈದ್ಯಕೀಯ ಶಾಖೆಗಳು ಬಹುಪಾಲು ಎಲ್ಲಾ ಶಾಖೆಗಳು ಗಣಿತದ ಮೇಲೆ ಅವಲಂಬಿಸಿರುತ್ತದೆ. ಕೆಲ ವಿಷಯಗಳಲ್ಲಿ ಬೀಜಗಣಿತ ಬೇಕಾದರೆ, ಮತ್ತಿತರ ವಿಷಯಗಳಲ್ಲಿ ಕಲನ ಶಾಸ್ತ್ರ (calculus) ಬೇಕಾಗಬಹುದು, ಇನ್ನಿತರ ವಿಷಯಗಳಲ್ಲಿ ರೇಖಾಗಣಿತದ ಬಳಿಕೆ ಹೆಚ್ಚಿರಬಹುದು - ಹೀಗೆ ಗಣಿತದ ರೂಪಗಳು, ಬೇಕಾಗುವ ಉಪ-ಶಾಖೆಗಳು ಬೇರೆ ಬೇರೆ ಇರಬಹುದು ಆದರೆ ಗಣಿತ ಇಲ್ಲದೆ ಇರುವುದು ಅಸಾಧ್ಯವೇ ಸರಿ. ವಾಸ್ತವವಾಗಿ ಗಣಿತವು ಪ್ರಕೃತಿಯ ಭಾಷೆ ಎಂದು ಪಂಡಿತರುಗಳು ಕರೆಯುತ್ತಾರೆ. ಇತ್ತೀಚೆಗೆ ವಿಜ್ಞಾನಿಗಳು ಹಾಗು ಗಣಿತಜ್ಞರು ಮಾನವನ ಭಾವನೆಗಲಾದ ಸಂತೋಷ ಮತ್ತು ದುಖಃಗಳಿಗೆ ಒಂದು ಈಕ್ವೇಶನ್ನ ಸೂಚಿಸಿದ್ದಾರೆ. ಕೆಲವು ಅಂಕಿಗಳನ್ನು ಮಾನಸಿಕ ಹಾಗು ದೈಹಿಕ ಪರೀಕ್ಷೆಗಳಿಂದ ಕಂಡುಹಿಡಿದು ಈಕ್ವೇಶನ್ನ ಉಪಯೋಗಿಸಿ ಒಬ್ಬ ವ್ಯಕ್ತಿ ಸಂತೋಷವಾಗಿದ್ದಾನೋ ಇಲ್ಲ ದುಖಃದಲ್ಲಿದ್ದಾನೋ ಎಂದು ಕಂಡುಹಿಡಿಯಬಹುದು. ನಾವು ರೋಗ-ರೂಜಿನಗಳನ್ನು ಹೋಗಲಾಡಿಸಲು ಉಪಯೋಗಿಸುವ ಔಷಧಗಳ ಪ್ರಮಾಣ, ವಾಹನಗಳಿಗೆ ಇಂಧನ ಹಾಕಿಸುವ ಪ್ರಮಾಣ, ಚಲಿಸುವಾಗ ಉಹಿಸುವ ಅವಧಿ, ಕಂಪ್ಯೂಟರ್ ಗಳು ನಮ್ಮ ಫೈಲ್ಗಳನ್ನು ಸಂಗ್ರಹಿಸುವ ವಿಧಾನ, ಮೊಬೈಲ್ ಫೋನ್ಗಳು ಕೆಲಸ ಮಾಡುವ ವಿಕಿರಣಗಳು ಸಂಚರಿಸುವ ವೇಗ ಹಾಗೂ ದೂರದ ಅಳತೆ - ಇಲ್ಲವೂ ಗಣಿತದ ಬಳಕೆಯಿಂದಲೇ ಸಾಧ್ಯ.
ನಾವು ಕಲೆ ಎಂದು ಪರಿಗಣಿಸಿಸುವ, ಮನಸ್ಸಿಗೆ ಮುದ ನೀಡುವ ಸಂಗೀತದಲ್ಲೂ ಗಣಿತದ ಬಳಿಕೆ ಅತ್ಯಗತ್ಯ. ರಾಗದ ಸ್ವರಗಳ ಬಳಕೆಗೆ, ತಾಳಕ್ಕೆ, ಲಯಕ್ಕೆ, ಶೃತಿಗೆ ಎಲ್ಲದಕ್ಕು ಗಣಿತದ ಜ್ಞಾನ ಮುಖ್ಯ.
ಹೀಗೆ ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲಿ ಬೆರತಿರುವ ಗಣಿತದ ಬಗ್ಗೆ ವಿರಕ್ತಿ ಒಳ್ಳೆಯದಲ್ಲ. ಅದರ ಬಗ್ಗೆ ವಿರಕ್ತಿ ಬಿಟ್ಟು ಸ್ವಲ್ಪ ಹಿಚ್ಚಿನ ಶ್ರದ್ಧೆ ಹಾಗು ಪರಿಶ್ರಮಗಳಿಂದ ಕರಗತ ಮಾಡಿಕೊಳ್ಳಬಹುದು. ನಾವು ವಿದ್ಯಾರ್ಥಿಗಳಾಗಿ ಇಷ್ಟು ಪ್ರಯುತ್ನ ಪಟ್ಟರೆ ಕ್ಲಿಷ್ಟ ಸಮಸ್ಯೆಗಳನ್ನು ಬಗೆಹರಿಸಲು ಗುರುಗಳ ಸಹಾಯವೂ ದೊರಕುತ್ತದೆ. ಎಲ್ಲವೂ ಒಬ್ಬ ಉಪಾಧ್ಯಾಯರೇ ಮಾಡಬೇಕೆಂದರೆ ಕಷ್ಟವಾಗುತ್ತದೆ. ಅವರಿಗೆ ಪಾಠ ಮಾಡುವುದರ ಜೊತೆಗೆ ಹಲವಾರು ಇತರೆ ಕೆಲಸಗಳು ಹೇರಿಸಲಾಗಿರುತ್ತದೆ. ಒತ್ತಡದಲ್ಲಿ ಪರಿಪೂರ್ಣವಾಗಿ ಪಾಠ ಮಾಡುವುದರ ಸಲುವಾಗಿ ಗಮನ ಕೊಡಲು ಸಾಧ್ಯವಾಗದಿರಬಹುದು. ನಾವು ಪ್ರಯತ್ನಿಸಿ ವಿಫಲವಾದಾಗ ಅವರ ನೆರವು ಕೇಳುವುದು ಉತ್ತಮ.

ಹಾಗಾಗಿ ನಮಗೆ ಯಾವ ವಿಷಯದ ಬಗ್ಗೆ ಬೇಕಾದರೂ ಪ್ರೀತಿ ಇರಬಹುದು, ಹಾಗೂ ಅದರಲ್ಲೆ ಏನಾದರು ಸಾಧಿಸಬೇಕೆಂಬ ಆಸೆಯೂ ಇರಬಹುದು ಆದರೆ ಅನ್ಯ ವಿಷಯಗಳ ಬಗ್ಗೆ ದ್ವೇಷವಾಗಲಿ ಅಪ್ರೀತಿಯಾಗಲಿ ಇರುವುದು ಸರಿಯಲ್ಲ. ಜೀವನದಲ್ಲಿ ಕಲಿಕೆ ಮುಖ್ಯಾ, ಅದು ಎಲ್ಲಿಂದಾದರೂ ಯಾವ ರೂಪದಲ್ಲಾದರೂ ಬರಬಹುದು. ಮನಸ್ಥಿತಿಯಿಂದ ನಾವು ಮುನ್ನಡೆದರೆ ನಮಗೆ ವಿದ್ಯೆ, ಯಶಸ್ಸು, ಕೀರ್ತಿ ಎಲ್ಲವೂ ದೊರಕುವುದು.
ಲೇಖಕ: ಸುಂದರ್ ಎಂ. ಎನ್




Comments

Popular posts from this blog

ಉದ್ದ ಅಳತೆಗಳ ಮೂಲಮಾನ

ಭೌತಶಾಸ್ತ್ರ ಏಂದರೇನು?