ರಕ್ತ ಚಂದನದ ರಕ್ತಸಿಕ್ತ ಸತ್ಯ


ರಕ್ತ ಚಂದನದ ರಕ್ತಸಿಕ್ತ ಸತ್ಯ



ನಾವು ಆಫ಼್ರಿಕಾ, ನೈಜೀರಿಯ ಇತ್ಯಾದಿ ದೇಶಗಳ ವನ್ಯಜೀವಿ ಅಪರಾಧಗಳ ಬಗ್ಗೆ ಮಾತನಾಡುತ್ತಿರಬೇಕಾದರೆ, ಭಾರತ ತನ್ನ ದೇಶದ ವನ್ಯಜೀವಿ ಅಪರಾಧಗಳ ತಡೆಗೆ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಲು ಯತ್ನಿಸುತ್ತಿದೆ. ನೋವಿನ ಸಂಗತಿಯೆಂದರೆ ಭಾರತ ವನ್ಯಜೀವಿ ಅಪರಾಧಗಳನ್ನು ತಡೆಯುವಲ್ಲಿ ಅಂತಹ ಮಹತ್ತರವಾದ ಕಾರ್ಯವನ್ನೇನೂ ಮಾಡಿಲ್ಲ.

      


ರಕ್ತ ಚಂದನ ಎಂಬುದು ಅತ್ಯಂತ ವಿಮರ್ಶಾತ್ಮಕವಾಗಿ ಅಪಾಯದಲ್ಲಿರುವ ಸಸ್ಯ ಸಸ್ತನಿ. ಇದು ಸುಮಾರು ೨೬ ಅಡಿ ಎತ್ತರ ಬೆಳೆಯುತ್ತದೆ. ಇದರ ಕಾಂಡದ ಸುತ್ತಳತೆ ಅಂದಾಜು ೧೫೦ ಸೆ.ಮೀ ಗಳು. ಇದರ ಎಲೆಗಳು ಸುಮಾರು ೩ ರಿಂದ ೯ ಸೆಂ.ಮೀ. ಗಳಷ್ಟು ಉದ್ದವಿರುತ್ತದೆ ಹಾಗು ತಲಾ ಒಂದು ಗೊಂಚಲಿನಲ್ಲಿ  ೩ ಎಲೆಗಳಿರುತ್ತವೆ. ವೈಜ್ಞಾನಿಕವಾಗಿ ಈ ಸಸ್ತನಿಯನ್ನು ಪೆಟ್ರೋಕಾರ್ಪಸ್ ಸಂಟಾಲಿನಸ್ ಎಂದು ಕರೆಯಲಾಗುತ್ತದೆ.ಇದನ್ನು ಆಂಗ್ಲ ಭಾಷೆಯಲ್ಲಿ ರೆಡ್ ಸ್ಯಾಂಡರ್ ಎಂದು ಕರೆಯಲಾಗುತ್ತದೆ.ಈ ಗಿಡಗಳು ನಮ್ಮ ದಕ್ಷಿಣ ಭಾರತದ ಪೂರ್ವ ಘಟ್ಟ ಪ್ರದೇಶಕ್ಕೆ ಸೀಮಿತವಾಗಿದ್ದರೂ ಕರ್ನಾಟಕದ ಹಲವು ಭಾಗಗಳಲ್ಲಿ ಕಂಡು ಬರುತ್ತವೆ. ಈ ಗಿಡಗಳ ಬೆಳವಣಿಗೆಗೆ ಶೇಲ್ ಮಿಶ್ರಿತ ಮಣ್ಣು, ಇತ್ತ ಮಲೆನಾಡೂ ಅಲ್ಲದ ಅತ್ತ ಬಯಲು ಸೀಮೆಯೂ ಅಲ್ಲದ ಪ್ರದೇಶ ಅತ್ಯಗತ್ಯ. ಹಾಗೂ ಸಮುದ್ರ ಮಟ್ಟದಿಂದ ಆ ಪ್ರದೇಶ ಸುಮಾರು ೨೪೬೦ ಅಡಿ ಎತ್ತರವಿರಬೇಕು. ರಕ್ತ ಚಂದನವನ್ನು ಅದರ ಬೆಳವಣಿಗೆಗೆ ತಕ್ಕಂತೆ ವಿವಿಧ ಶ್ರೇಣಿಗಳಾಗಿ ವಿಂಗಡಿಸಲಾಗುತ್ತದೆ. ಉದಾಹರಣೆಗೆ ರಕ್ತ ಚಂದನದ ಕಾಂಡದ ಮೇಲೆ ನೀರಿನ ಅಲೆಗಳ ಆಕಾರದಲ್ಲಿ ಗೆರೆಗಳಿದ್ದರೆ ಅದನ್ನು ’ಎ’ ಶ್ರೇಣಿಗೆ ಸೇರಿಸಲಾಗುತ್ತದೆ. ರಕ್ತ ಚಂದನವನ್ನು ಹೆಚ್ಚಾಗಿ ಚೀನೀ ಔಷಧಿಗಳಲ್ಲಿ ಬಳಸಲಾಗುತ್ತದೆ. ಚೀನೀ ವೈದ್ಯಕೀಯ ವಿಜ್ಞಾನಕ್ಕೆ ರಕ್ತ ಚಂದನವನ್ನು ಮೊದಲು ಪರಿಚಯಿಸಿದವರು ಚೀನಾ ದೇಶದ ಕ್ವಿಂಗ್ ರಾಜವಂಶಸ್ಥರು.

      

ಕರ್ನಾಟಕ ಅರಣ್ಯ ಇಲಾಖೆಯ ವರದಿ ಪ್ರಕಾರ ಜನವರಿ ೨೦೧೩ ರಿಂದ ಜನವರಿ ೨೦೧೪ ರ ವರೆಗೆ ಸುಮಾರು ೫೦೦೦೦ ಕೆ.ಜಿ. ರಕ್ತ ಚಂದನ ಮರದ ನಾಟಾಗಳನ್ನು ಕರ್ನಾಟಕ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಪ್ರತೀ ಒಂದು ಕೆ.ಜಿ. ರಕ್ತ ಚಂದನ ಸುಮಾರು ರೂ.೩೦೦೦ ದಿಂದ ರೂ.೧೦೦೦೦ ದ ವರೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಬಾಳುತ್ತದೆ. ಭಾರತದಲ್ಲಿ ರಕ್ತ ಚಂದನಕ್ಕೆ ಹೆಚ್ಚಾಗಿ ಬೇಡಿಕೆಯಿರದಿದ್ದರೂ ಚೀನಾ ಹಾಗೂ ಇತರ ದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಅಂತರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ರಕ್ತ ಚಂದನವನ್ನು ’ವಿಮರ್ಶಾತ್ಮಕವಾಗಿ ಅಪಾಯದಲ್ಲಿರುವ ಸಸ್ಯ ಸಸ್ತನಿ’ ಎಂದು ಗುರುತಿಸಿದೆ. ಇಷ್ಟಾದರೂ ಭಾರತ ಮಾತ್ರ ರಕ್ತ ಚಂದನದ ಸಂರಕ್ಷಣೆಯ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಂತಿಲ್ಲ.ರಾಷ್ಟ್ರೀಯ ಹೆದ್ದಾರಿ ೪ ರ ಆಸುಪಾಸಿನಲ್ಲಿರುವ ಕುರುಚಲು ಕಾಡು ಪ್ರದೇಶಗಳಿಂದ ನಿರಂತರವಾಗಿ  ಮುಂಬೈ ಹಾಗೂ ಕೊಲ್ಕತ್ತಾ ನಗರಗಳಿಗೆ ಕಾರಿನಿಂದ ಹಿಡಿದು ಲಾರಿಗಳವರೆಗೆ ವಿವಿಧ ರೀತಿಯಲ್ಲಿ  ರಾಜಾರೋಷವಾಗಿ ರಕ್ತ ಚಂದನ ಕಳ್ಳಸಾಗಣೆಯಾಗುತ್ತಿದೆ.ಅಲ್ಲಿಂದ ಬೇರೆ ದೇಶಗಳಿಗೆ ರಕ್ತ ಚಂದನ ರವಾನೆಯಾಗುತ್ತದೆ. ರಕ್ತ ಚಂದನವನ್ನು ಜಪ್ತಿಗೊಳಿಸಿದ ಒಟ್ಟು ೨೭ ಪ್ರಕರಣಗಳು ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಹಾಗು ಕೋಲಾರ ವ್ಯಾಪ್ತಿಯಲ್ಲಿ ಜರುಗಿವೆ. ಈ ಪ್ರಕರಣಗಳಲ್ಲಿ ೯ ಟನ್ ರಕ್ತ ಚಂದನವನ್ನು ನಮ್ಮ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿಯೇ ಜಪ್ತಿಗೊಳಿಸಲಾಗಿದೆ. ಆಂಧ್ರ ಪ್ರದೇಶ ರಕ್ತ ಚಂದನ ಕಳ್ಳ ಸಾಗಾಣಿಕೆಯಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ಸ್ಥಾನ ಗಳಿಸಿಕೊಂಡಿದೆ.ಅದರಲ್ಲೂ ತಿರುಪತಿ ಪ್ರದೇಶದ ಕಾಡುಗಳಲ್ಲಿಯೇ ರಕ್ತ ಚಂದನದ ಕಳ್ಳ ಸಾಗಣೆ ಹೆಚ್ಚು.ಇದಕ್ಕೆ ಇಂಬು ಕೊಡುವಂತೆ ೨೦೧೩ ರ ಡಿಸೆಂಬರ್ ೧೫ ರಂದು ಕಳ್ಳಸಾಗಾಣಿಕೆಕಾರರನ್ನು ಹಿಡಿಯಲು ಹೋದ ಇಬ್ಬರು ವಲಯ ಅರಣ್ಯ ಅಧಿಕಾರಿಗಳನ್ನು ತಿರುಪತಿಯ ಕಾಡಿನಲ್ಲಿ ಸುಮಾರು ೨೦೦ ಜನರ ಮರ ಕಳ್ಳಸಾಗಾಣಿಕೆಯ ತಂಡ ಬೀಭತ್ಸ ರೀತಿಯಲ್ಲಿ ಹತ್ಯೆ ಮಾಡಿ ಶಿರಚ್ಛೇದ ಮಾಡಿತು. ಕಳ್ಳಸಾಗಾಣಿಕೆಯನ್ನು ತಡೆಯಲು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ನಡುವೆ ಹಲವರು ಆಮೀಶಕ್ಕೊಳಗಾಗಿ ಅಪರಾಧಿಗಳ ಸಹಾಯಕ್ಕಾಗಿ ನಿಂತಿದ್ದಾರೆ. ಇದರಿಂದ ಸಂಪೂರ್ಣ ಅರಣ್ಯ ರಕ್ಷಣಿ ಭಾರತದ ಮಟ್ಟಿಗೆ  ಗಗನ ಕುಸುಮವಾಗಿಯೇ ಉಳಿದಿದೆ. ನಮ್ಮ ದೇಶದ ಕಾನೂನು ವ್ಯವಸ್ಥೆ , ಪೊಲೀಸ್, ಅರಣ್ಯ ಮತ್ತು ಇತರ ಇಲಾಖೆಗಳ ನಡುವೆಯಿರುವ ಸಮನ್ವಯ ಕೊರತೆ ಕೂಡ ಅರಣ್ಯ ಸಂರಕ್ಷಣೆಗೆ ತಡೆಗೋಡೆಯಾಗಿದೆ.ವಿಶ್ವದಲ್ಲಿಯೇ ಅತೀ ಹೆಚ್ಚು ಅರಣ್ಯ ಉತ್ಪನ್ನಗಳ ಗ್ರಾಹಕವಾಗಿರುವ ಚೀನಾ ದೇಶ ಅರಣ್ಯ ಸಂರಕ್ಷಣೆಯ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ಭಾರತ ಇನ್ನಾದರೂ ತಲೆಕೆಡಿಸಿಕೊಳ್ಳದಿದ್ದರೆ ಭಾರತದ ವನ್ಯ ಸಂಪತ್ತು ನೇಪಥ್ಯಕ್ಕೆ ಸೇರುವ ದಿನ ಹೆಚ್ಚು ದೂರವಿಲ್ಲ.

Comments

Popular posts from this blog

ಉದ್ದ ಅಳತೆಗಳ ಮೂಲಮಾನ

ಗಣಿತಶಾಸ್ತ್ರದ ಪ್ರಾಮುಖ್ಯತೆ!

ಭೌತಶಾಸ್ತ್ರ ಏಂದರೇನು?